ಬಂಟ್ವಾಳ : ತೆಂಗಿನ ಮರದಿಂದ ನೀರಾ ಇಳಿಸಲು ಸರ್ಕಾರಿ ಅನುಮತಿ ನೀಡುವ ಸಲುವಾಗಿ ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಪ್ರಗತಿಪರ ಕೃಷಿಕ ಮುಖಂಡ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಅಬಕಾರಿ ವ್ಯಾಪ್ತಿಯಿಂದ ಹೊರ ತಂದಲ್ಲಿ ಎಲ್ಲಾ ತೆಂಗುಬೆಳೆಗಾರರಿಗೆ ಅನುಕೂಲವಾಗುತ್ತದೆ. ಕರಾವಳಿಯಲ್ಲಿ ನೀರಾ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡಿದಂತಾಗುತ್ತದೆ ಜೊತೆಗೆ ನೀರಾ ಘಟಕ ರಾಜ್ಯಾದ್ಯಂತ ಆರಂಭವಾದರೆ ತೆಂಗಿನಕಾಯಿಗೆ ಉತ್ತಮ ಧಾರಣೆ ಸಿಗುವಂತಾಗಲು ಹಾಗೂ ತೆಂಗಿನ ಕೃಷಿಗೆ ಬರುವ ನುಸಿ ಪೀಡೆ ಸಂಪೂರ್ಣ ನಿವಾರಣೆಗೂ ಅನುಕೂಲವಾಗುತ್ತದೆ. ಕೃಷಿಕರೂ ಇದನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡಲ್ಲಿ ಅಪಾರ ಪ್ರಮಾಣದಲ್ಲಿ ಕೃಷಿಕರಿಗೆ ಕೆಲಸ, ನೀರಾ ಘಟಕದ ಪೂರಕ ವ್ಯವಸ್ಥೆಯಲ್ಲಿ ಸಹಸ್ರಾರು ಉದ್ಯೋಗ ಸೃಷ್ಟಿ ಆಗುವ ಸಾಧ್ಯತೆ ಇದೆ ಎಂದವರು ತೆಂಗು ಬೆಳೆಗಾರರ ಪರವಾದ ಈ ತಿರ್ಮಾನಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.