ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ ಕೊನೆಯ ದಿನದ ಪಾದಯಾತ್ರೆಗೆ ಭಾನುವಾರ ಬೆಳಿಗ್ಗೆ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ಚಾಲನೆ ನೀಡಲಾಯಿತು.
ಇದಕ್ಕಿಂತಲೂ ಮೊದಲು 65ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಧ್ವಜಾರೋಹಣನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಜನಸಾಮಾನ್ಯರು ತೆರಿಗೆಯ ರೂಪದಲ್ಲಿ ಕಟ್ಟಿದ ಕೋಟ್ಯಾಂತರ ರುಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ಅವ್ಯವಹರದ ಮೂಲಕ ವ್ಯರ್ಥಗೊಳಿಸಿದೆ.
ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯ ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿಸಿದರೆ ಮಾತ್ರ ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.
ಬಳಿಕ ಜಾರಂದಗುಡ್ಡೆಯಲ್ಲಿ ಹಿಂದೂಜಾಗರಣ ವೇದಿಕೆಯ ಕಟ್ಟೆಯನ್ನು ರಾಜೇಶ್ ನಾಕ್ ಉದ್ಘಾಟಿಸಿದರು. ಬಳಿಕ ಪಾದಯಾತ್ರೆ ಬ್ರಹ್ಮರಕೂಟ್ಲು, ಬಿ.ಸಿ.ರೋಡು ಬಂಟ್ವಾಳ ಮಾರ್ಗವಾಗಿ ಸಂಚರಿಸಿ ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಸಮಾಪನಗೊಂಡಿತು.
ಕೊನೆಯ ದಿನದ ಪಾದಯಾತ್ರೆಯಲ್ಲಿ ಕಾರ್ಯಕ್ರಮದ ರುವಾರಿ ರಾಜೇಶ್ ನಾಕ್ ಉಳೇಪಾಡಿಗುತ್ತು, ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಜಿ.ಆನಂದ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪುರಸಭೆ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ಬಿ. ಪ್ರಮುಖರಾದ ಸುಲೋಚನಾ ಭಟ್, ರಾಮದಾಸ್ ಬಂಟ್ವಾಳ, ಪರುಷ ಸಾಲ್ಯಾನ್ ನೆತ್ತರಕೆರೆ, ರೋನಾಲ್ಡ್ ಡಿಸೋಜಾ, ಅಬ್ದುಲ್ ರಝಾಕ್ ಪ್ರಥ್ವಿರಾಜ್, ಗೋವಿಂದ ಪ್ರಭು ಮತ್ತಿತರರು ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾರೋಪ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಯಡಿಯೂರಪ್ಪ ಸಾಥ್:
ಬಿಜೆಪಿ ನಡಿಗೆ ಗ್ರಾಮದ ಕಡೆಗೆ ಪಾದಾಯಾತ್ರೆ ಬ್ರಹ್ಮರಕೂಟ್ಲು ತಲುಪುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾದಾಯಾತ್ರೆಗೆ ಸಾಥ್ ನೀಡಿದರು.
ಸ್ವಲ್ಪ ದೂರದವರೆಗೆ ಹೆಜ್ಜೆ ಹಾಕಿದ ಯಡಿಯೂರಪ್ಪ ಶುಭ ಹಾರೈಸಿ ಸುಳ್ಯಕ್ಕೆ ತೆರಳಿದರು. ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನಸಭಾ ಮಾಜಿ ಸಭಾಪತಿ ಯೋಗೀಶ್ ಭಟ್ ಜತೆಗಿದ್ದರು.