ಬಂಟ್ವಾಳ : ಕಾಂಗ್ರೆಸ್‌ನಿಂದ ಹದಗೆಟ್ಟಿರುವ ದೇಶದ ಸ್ಥಿತಿಗತಿಯನ್ನು ಸುಸ್ಥಿಗೆ ತರಲು ನರೇಂದ್ರ ಮೋದಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 7 ನೇ ದಿನವಾದ ಸೋಮವಾರ ಸಂಜೆ ಉಳಿಗ್ರಾಮದ ಕಕ್ಕೆಪದವಿನ ಗರಡಿ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಬೆಲೆ ಏರಿಕೆ, ಸಬ್ಸಿಡಿ ಕಡಿತ ಮೊದಲಾದ ಜನವಿರೋಧಿ ನೀತಿಗಳನ್ನು ಬಡವರ ಮೇಲೆ ಹೇರುತ್ತಿದ್ದಾರೆ, ಕಾಂಗ್ರೇಸ್ ಆಡಳಿತದಿಂದ ದೇಶದ ಪರಿಸ್ಥಿತಿ ಗಂಭೀರವಾಗಿದೆ, ವಾಜಪೇಯಿ ಸರ್ಕಾರದ ಅವಧಿಯಲ್ಲಿ ದೇಶ ಕಂಡಿದ್ದ ಸುಧಾರಣೆಗಳನ್ನು ಮುಂದುವರಿಸಲು ಕಾಂಗ್ರೇಸ್‌ಗೆ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯಾಗಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.
ಈ ಬಾರಿ ಸ್ವಂತ ಬಲದಲ್ಲಿಯೇ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದ ಅವರು, ಈ ದೆಸೆಯಲ್ಲಿ ಇದಕ್ಕಾಗಿ ಕಾರ್ಯಕರ್ತರು ಪಣತೊಡಬೇಕಾಗಿದೆ ಎಂದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ. 26 ರಂದು ಬಿ.ಸಿ.ರೋಡಿನಲ್ಲಿ ನಡೆಯುವ ಪಾದಯಾತ್ರೆಯ ಸಮಾರೋಪದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರು ಭಾಗವಹಿಸಲಿದ್ದಾರೆ, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಕಾರ್ಯಕ್ರಮ ಸಂಚಾಲಕ , ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 7 ದಿನಗಳಲ್ಲಿ ಪಾದಯಾತ್ರೆಯು 154 ಕಿ,ಮೀ. ಕ್ರಮಿಸಿದ್ದು, ಸಾವಿರಾರು ಕಾರ್ಯಕರ್ತರ ಜೊತೆ ಪಕ್ಷ ಸಂಘಟನೆಯ ಕುರಿತಾಗಿ ಸಮಾಲೋಚನೆ ನಡೆಸಲಾಗಿದೆ, ಎಲ್ಲೆಡೆಯಲ್ಲೂ ಅಭೂತಪೂರ್ವ ಬೆಂಬಲ ದೊರೆತಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ “ಗ್ರಾಮದೆಡೆಗೆ -ಬಿಜೆಪಿ ನಡಿಗೆ ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಮಾತನಾಡಿ, ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರು ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವುದು ಖುಷಿಕೊಟ್ಟಿದೆ ಎಂದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಪುರುಷ ಎನ್ ಸಾಲ್ಯಾನ್ ನೆತ್ರಕೆರೆ ಮಾತನಾಡಿ, ದೇಶಕಟ್ಟುವಲ್ಲಿ ಯುವಕರು ಕಂಕಣಬದ್ದರಾಗಬೇಕು, ಮೋದಿ ಪ್ರಧಾನಮಂತ್ರಿಯಾಗುವಲ್ಲಿ ಯುವ ಸಮುದಾಯ ಶ್ರಮಿಸಬೇಕೆಂದು ಕರೆನೀಡಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿಕೆ ಭಟ್ ಮಾತನಾಡಿದರು.
ಪಕ್ಷದ ಪ್ರಮುಖರಾದ ದಿನೇಶ್ ಭಂಡಾರಿ, ಆನಂದ ಶಂಭೂರು, ರಾಮದಾಸ್ ಬಂಟ್ವಾಳ, ಹರಿಶ್ಚಂದ್ರ ಪೂಜಾರಿ, ದಿನೇಶ್ ಅಮ್ಟೂರು, ಪೃಥ್ವಿರಾಜ್, ನಾಲೂರುಮಾಗಣೆಗುತ್ತು ರತ್ನಾಕರಕೊಂಡೆ, ಧನಂಜಯ ಶೆಟ್ಟಿ ಸರಪಾಡಿ, ರಾಮಕೃಷ್ಣ ಮಯ್ಯ, ಜಯಶೆಟ್ಟಿ ಕಿಂಜಾಲು, ಪದ್ಮನಾಭ ಶೆಟ್ಟಿ, ದೇವಪ್ಪ ಪೂಜಾರಿ, ಚರಣ್ ಜುಮಾದಿಗುಡ್ಡೆ, ರೊನಾಲ್ಡ್ ಡಿಸೋಜ ಅಮ್ಟಾಡಿ, ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.ವಸಂತ ಸಾಲಿಯಾನ್ ಸ್ವಾಗತಿಸಿದರು. ಹರೀಶ್ ಕಕ್ಯ ವಂದಿಸಿದರು. ವೃಷಭರಾಜ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.