ಬಂಟ್ವಾಳ : ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ನೇತೃತ್ವದ ಸರ್ಕಾರದ ತಪ್ಪು ರಕ್ಷಣಾ ನೀತಿಯಿಂದಾಗಿ ದೇಶದಲ್ಲಿ ಆತಂರಿಕ ಅಭದ್ರತೆ ಉಂಟಾಗಿದ್ದು, ಉತ್ತರಭಾರತದಲ್ಲಿ ಮಾತ್ರ ಇದ್ದ ಭಯೋತ್ಪಾದಕರು ದಕ್ಷಿಣದ ಗಲ್ಲಿಗಲ್ಲಿಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಸತೀಶ್ ಪ್ರಭು ಆಪಾದಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 6 ನೇ ದಿನವಾದ ಭಾನುವಾರ ಸಂಜೆ ನಾವೂರು ಗ್ರಾಮದ ಕನಪಾದೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ದೇಶದ ಬಡಜನತೆಯ ಬಗ್ಗೆ ಕಾಂಗ್ರೆಸಿಗೆ ಕಾಳಜಿಯೇ ಇಲ್ಲ, ಬೆಲೆ ಏರಿಕೆ, ಸಬ್ಸಿಡಿ ಕಡಿತ ಮೊದಲಾದ ಜನವಿರೋಧಿ ನೀತಿಗಳನ್ನು ಬಡವರ ಮೇಲೆ ಹೇರುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ದೇಶವನ್ನು ಕಾಂಗ್ರೆಸ್ ಮುಕ್ತವನ್ನಾಗಿಸಲು ಬಿಜೆಪಿ ಕಾರ್ಯಕರ್ತರು ಪಣತೊಡಬೇಕಾಗಿದೆ, ರಾಜ್ಯಸರ್ಕಾರ ಜನಪರ ಎಂಬ ಹೆಸರಿನಲ್ಲಿ ಜಾರಿಗೊಳಿಸುತ್ತಿರುವ ಯಾವ ಯೋಜನೆಗಳೂ ಜನರನ್ನು ತಲುಪುತ್ತಿಲ್ಲ, ಕೇವಲ ಒಂದೇ ವರ್ಗದ ಜನರನ್ನು ಓಲೈಸಲು ಕೇಂದ್ರ ಹಾಘೂ ರಾಜ್ಯ ಸರ್ಕಾರಗಳು ನಿರತವಾಗಿದ್ದು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ದೂರವುಳಿದಿರುವ ಎಲ್ಲರನ್ನೂ ಮತ್ತೆ ಬಿಜೆಪಿಯತ್ತ ಸೆಳೆಯುವಲ್ಲಿ ಪಕ್ಷದ ಕಾರ್ಯಕರ್ತರು ಶ್ರಮ ವಹಿಸಬೇಕಾಗಿದೆ ಎಂದರು.ಕಾರ್ಯಕ್ರಮ ಸಂಚಾಲಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ ಹಾಗೂ ದ.ಕ.ಜಿಲ್ಲಾ ಬಿಜೆಪಿಯ ಕೋಶಾಧಿಕಾರಿ ಸಂಜಯ ಪ್ರಭು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ “ಗ್ರಾಮದೆಡೆಗೆ -ಬಿಜೆಪಿ ನಡಿಗೆ ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಮಾತನಾಡಿ, ಲೋಕಸಭಾ ಚುನಾವಣೆಯವರೆಗೂ ತಾನು ವಿರಮಿಸುವುದಿಲ್ಲ, ಪಕ್ಷದ ಸಂಘಟನಾ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.ಪಕ್ಷದ ಪ್ರಮುಖರಾದ ಪುರುಷ ಸಾಲ್ಯಾನ್, ಪೃಥ್ವಿರಾಜ್, ವಿಲಾಸಿನಿ ಶಾಂತವೀರ ಪೂಜಾರಿ, ದಿನೇಶ್ ಅಮ್ಟೂರು, ಗಿರಿಜ, ರಾಮಚಂದ್ರ ಭಟ್ ಚರಣ್ ಜುಮಾದಿಗುಡ್ಡೆ, ರೊನಾಲ್ಡ್ ಡಿಸೋಜ ಅಮ್ಟಾಡಿ, ಅಬ್ದುಲ್ ರಝಾಕ್ ಮತ್ತಿತರರು ಉಪಸ್ಥಿತರಿದ್ದರು.
ಸದಾನಂದ ಹಳೆಗೇಟು ಸ್ವಾಗತಿಸಿದರು. ದೇವಪ್ಪ ಪೂಜಾರಿ ವಂದಿಸಿದರು. ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು.