ಬಂಟ್ವಾಳ: ಸರಕಾರಿ ನೌಕಕರ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಬಹಳ ಸಹಕಾರಿಯಾಗಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು. ಕಂದಾಯ ಇಲಾಖಾ ಜಿಲ್ಲಾ ನೌಕಕರ ಸಂಘ(ರಿ.) ದ ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ಜಿಲ್ಲಾ ಮಟ್ಟದ ಕಂದಾಯ ಇಲಾಖೆಯ ನೌಕರರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟದ ಉದ್ಘಾಟನೆ ನಡೆಸಿ ಬಳಿಕ ಅವರು ಮಾತನಾಡಿದರು.
ಪ್ರತಿಯೊಬ್ಬರು ದೇಹವನ್ನು ದೈಹಿಕವಾಗಿ ದಂಡಿಸಿದಾಗ ಆರೋಗ್ಯ ರಕ್ಷಣೆ ಸಾಧ್ಯ, ಇಂತಹ ಕ್ರೀಡಾಕೂಟಗಳು ಇತರರಿಗೂ ಸ್ಪೂರ್ತಿಯಾಗಲಿ. ಕೆಲಸದ ಜೊತೆ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಅವರು ತಿಳಿಸಿದರು. ಕ್ರೀಡೆಗಳು ಮನುಷ್ಯನ ಸಂತೋಷದ ಜೊತೆಯಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ ಎಂದು ಅವರು ಹೇಳಿದರು.
ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್ ಅವರು ಮಾತನಾಡಿ ಆತ್ಮೀಯತೆಗಾಗಿ ಕ್ರೀಡೆ ಸಹಾಯಕವಾಗುತ್ತದೆ, ಇಂತಹ ಕ್ರೀಡಾಕೂಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮನಸ್ಸು ಬಹಳ ಮುಖ್ಯ, ಹೊರತು ಬಹುಮಾನದ ಕನಸು ಯಾವತ್ತೂ ಬೇಡ ಎಂದು ಅವರು ಹೇಳಿದರು.
ಜಿಲ್ಲಾ ಅಧ್ಯಕ್ಷ ಕೆ.ಎಂ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಅಂದಾನಗೌಡ ದಾನಪ್ಪಗೌಡ್ರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಪುರಸಭಾ ಸದಸ್ಯ ಗೋವಿಂದ ಪ್ರಭು, ಮೂಡಬಿದ್ರೆ ತಹಶೀಲ್ದಾರ್ ಅನಿತಾಲಕ್ಮೀ, ಎಸ್.ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಕಡಬ ತಹಶೀಲ್ದಾರ್ ಜೋನ್ ಪ್ರಕಾಶ್ ರೊಡ್ರಿಗಸ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಂದಾಯ ಇಲಾಖಾ ತಾಲೂಕು ಅಧ್ಯಕ್ಷ ತೌಫೀಕ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ನವೀನ್ ಸ್ವಾಗತಿಸಿ, ಕಂದಾಯ ನಿರೀಕ್ಷಕ ರಾಮ ಕೆ. ವಂದಿಸಿದರು. ಸುಧಾಕರ ಕಾರ್ಯಕ್ರಮ ನಿರೂಪಿಸಿದರು.