Rajesh Naik

“ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಅವರ “ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮಕ್ಕೆ ಮಂಚಿ ಗ್ರಾಮ ಪಂಚಾಯತ್‌ನಲ್ಲಿ ಚಾಲನೆ ನೀಡಿದರು.

ಗ್ರಾಮದ ಬಹುತೇಕ ಸಮಸ್ಯೆಗಳನ್ನು ಹಂತ ಹಂತವಾಗಿ ಆದ್ಯತೆಯ ನೆಲೆಯಲ್ಲಿ ಪರಿಹಾರ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆಯನ್ನು ಶಾಸಕ ರಾಜೇಶ್ ನಾೖಕ್‌ ನೀಡಿದರು. ಆರಂಭದಲ್ಲಿ ರಾಜ ಧರ್ಮ ಪಾಲಿಸುತ್ತೇನೆ ಎಂದು ಹೇಳಿದ್ದೇನೆ. ಅದೇ ರೀತಿ ಕ್ಷೇತ್ರದ ಜನರಿಗೆ ಅನ್ಯಾಯವಾಗದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಗ್ರಾಮದ ಜನರ ಸಮಸ್ಯೆಗಳು ಕಚೇರಿ ಕಚೇರಿ ಅಲೆದಾಡುವ ಸ್ಥಿತಿ ಉಂಟಾಗದೆ ಜನರಿಗೆ ಗ್ರಾಮ ಪಂಚಾಯತ್‌ನಲ್ಲೇ ವಿಲೇವಾರಿ ಆಗುವಂತೆ ಮಾಡಲು ಚಿಂತನೆ ಮಾಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಸರಕಾರದಿಂದ ಸೌಲ್ಯಭ್ಯಗಳಿಂದ ಜನರು ವಂಚಿತರಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ಮಂಚಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 90 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದೆ ಎಂದರು.

ಗ್ರಾಮ ಪಂಚಾಯತ್‌ನಲ್ಲಿ ಅಹವಾಲು ಸ್ವೀಕಾರ ಸಂದರ್ಭದಲ್ಲಿ ಸ್ಮಶಾನ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು ಉದ್ಘಾಟನೆಯ ವೇಳೆ ರಸ್ತೆಯ ಕಾಂಕ್ರೀಟ್ ಕೆಲಸ ತುರ್ತಾಗಿ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಜೊತೆಗೆ 57 ರಸ್ತೆಗಳ ಅಭಿವೃದ್ಧಿಯ ಬಗ್ಗೆ ಅರ್ಜಿಗಳು ಬಂದಿವೆ.ಎಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು. ಮಡಿವಾಳ ಬೈಲು ಎಂಬಲ್ಲಿ ರಸ್ತೆ ಹಾಗೂ ನೀರಿನ ಸಮಸ್ಯೆಯ ಬಗ್ಗೆ ಮಹಿಳೆಯರು ಮನವಿ ಮಾಡಿದರು.

ವೃದ್ದಾಪ್ಯ ವೇತನ ಸಿಗದೆ ಇರುವ ವ್ಯಕ್ತಿಯೋರ್ವರ ಸಮಸ್ಯೆಯನ್ನು ಕಂದಾಯ ಅಧಿಕಾರಿ ಸ್ಥಳದಲ್ಲಿಯೇ ಪರಿಹಾರ ಮಾಡಿದರು. ಎಲ್ಲಾ ಮನೆ ಮನೆಗಳಲ್ಲಿ ಮಳೆ ಕೊಯ್ಲು ಅಳವಡಿಸುವ ಬಗ್ಗೆ ಸಭೆಯಲ್ಲಿ ಬಂದ ಮನವಿಗೆ ಸ್ಪಂದಿಸಿದ ಶಾಸಕ ರಾಜೇಶ್ ನಾೖಕ್‌ ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ತಾಲೂಕಿನಲ್ಲಿ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಬೋರ್‌ವೆಲ್ ರೀಚಾರ್ಜ್ ಮಳೆ ಕೊಯ್ಲು, ಹೀಗೆ ಅನೇಕ ರೀತಿಯಲ್ಲಿ ನೀರನ್ನು ಇಂಗಿಸುವ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರದಂತೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳವ ಯೋಚನೆ ಮಾಡಿದ್ದೇವೆ ಎಂದರು. ಅಡಿಕೆ ಬೆಲೆಗಾರರಿಗೆ ಅನುಕೂಲವಾಗುವಂತೆ ಯಂತ್ರವೊಂದು ಬಂದಿದೆ ಈ ಸಲಕರಣೆಯನ್ನು ಸರಕಾರದ ಸಬ್ಸಿಡಿಯಲ್ಲಿ ಸಿಗುವಂತೆ ಮಾಡಲು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು ಈ ಯಂತ್ರಕ್ಕೆ ಸರಕಾರದಿಂದ ಮಂಜೂರಾತಿ ಸಿಗದೆ ಇರುವುದರಿಂದ ಸಬ್ಸಿಡಿ ಸಾಧ್ಯವಿಲ್ಲ. ಅದರೆ ಈ ಬಗ್ಗೆ ಚರ್ಚೆ ಮಾಡುವ ಭರವಸೆ ನೀಡಿದರು .

ಆರಂಭದಲ್ಲಿ ಶಾಸಕರ ಅನುದಾನದಲ್ಲಿ ನಡೆಯುವ ವಿವಿಧ ಕಾಮಗಾರಿಗಳ ವೀಕ್ಷಣೆ ನಡೆಸಿದರು. 20 ಲಕ್ಷ ವೆಚ್ಚದಲ್ಲಿ ಮಂಚಿ ನೂಜಿ ಕೂಟೇಲು ತಡೆಗೋಡೆ ಹಾಗೂ 30 ಲಕ್ಷ ವೆಚ್ಚದಲ್ಲಿ ನೂಜಿ ಹಾಲಬೆ ಕಿರು ಸೇತುವೆ ನಡೆದ ಕಾಮಗಾರಿಯನ್ನು ಶಾಸಕರು ವೀಕ್ಷಣೆ ನಡೆಸಿದರು.

ಮಂಚಿ ಮತ್ತು ಇರಾ ಉಪಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಹುದ್ದೆ ಖಾಲಿ ಇದೆ, ಪ್ರಸ್ತುತ ಪ್ರಭಾರ ಇದ್ದ ಅರೋಗ್ಯ ಸಹಾಯಕಿ ಕಚೇರಿಗೆ ಬರದೆ ತೊಂದರೆಯಾಗುತ್ತಿದೆ ಎಂದು ಆಶಾ ಕಾರ್ಯಕರ್ತೆ ಯರು ಶಾಸಕರ ಗಮನಕ್ಕೆ ತಂದಾಗ ಡಿ.ಎಚ್.ಒ.ಅವರನ್ನು ಪೋನ್ ಮೂಲಕ ಸಂಪರ್ಕ ಮಾಡಿ ಆರೋಗ್ಯ ಸಹಾಯಕಿ ನೇಮಕ ಮಾಡುವಂತೆ ತಿಳಿಸಿದರು.

ಅ ಬಳಿಕ ಪಂಚಾಯತ್‌ಗೆ ಬೇಟಿ ನೀಡಿ ಗ್ರಾಮ ಪಂಚಾಯತ್ ಸದಸ್ಯರು ಪಿ.ಡಿ.ಒ.ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರಲ್ಲದೆ, ಪಂಚಾಯತ್‌ನಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಯಾವ ರೀತಿಯ ಪರಿಹಾರಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿಸಿದರು. ಕುಡಿಯುವ ನೀರಿನ ಬಗ್ಗೆ, ಕಸವಿಲೇವಾರಿ ತ್ಯಾಜ್ಯ ಸಮಸ್ಯೆ, ತೆರಿಗೆ ವಸೂಲಾತಿ, ಸ್ಮಶಾನ, ವಸತಿ ಯೋಜನೆ, 94 ಸಿ , ಕಿಸಾನ್ ಸನ್ಮಾನ್, ಉದ್ಯೋಗ ಖಾತರಿ ಯೋಜನೆ, ಹೀಗೆ ಅನೇಕ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಮಸ್ಯೆಗಳಿರುವ ಕಡೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ, ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ, ಸದಸ್ಯ ರಾದ ಕೇಶವ ರಾವ್, ಉದಯಶಂಕರ್, ಕೃಷ್ಣ ಪ್ಪ ಬಂಗೇರ, ಪುಷ್ಪಾ ಎಸ್.ಕಾಮತ್, ಕೆ.ಎಸ್. ಪ್ರತಿಮಾ, ಸುಮಾ , ಸುಮತಿ, ಮೋಹನ್ ಪ್ರಭು, ಪಿ.ಡಿ.ಒ.ಮಯಾ ಕುಮಾರಿ, ಕಾರ್ಯದರ್ಶಿ ರಮೇಶ್, ಕಂದಾಯ ನಿರೀಕ್ಷಕ ರಾಮ, ಪಂಚಾಯತ್ ರಾಜ್ ಇಂಜಿನಿಯರ್ ಪ್ರಸನ್ನ ಹಾಗೂ ಕುಶ ಕುಮಾರ್, ಸಣ್ಣ ನೀರಾವರಿ ಇಂಜಿನಿಯರ್ ಪ್ರಸನ್ನ, ಬೀಟ್ ಪೋಲೀಸ್ ಮೋಹನ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಮುಖರಾದ ರಾಮ್‌ದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರತ್ನಕುಮಾರ್ ಚೌಟ, ಪುರುಷೋತ್ತಮ ಶೆಟ್ಟಿ, ಬಾಲಕೃಷ್ಣ ಸೇರ್ಕಳ, ಹರೀಶ್ ಬೇಡಗುಡ್ಡೆ, ರಮೇಶ್ ರಾವ್ ಮಂಚಿ, ಹ್ಯಾರೀಶ್ ಮಂಚಿ, ಮೋಹನ್ ಪಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.

ಪಂಚಾಯತ್ ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ ಸ್ವಾಗತಿಸಿದರು. ಗ್ರಾ.ಪಂ.ಸದಸ್ಯ ಕೇಶವ ರಾವ್ ವಂದಿಸಿದರು.

Manchi-gram-pan-3

Manchi-gram-pan-1

Manchi-gram-pan-2

Back To Top
Highslide for Wordpress Plugin