ಬಂಟ್ವಾಳ; ಪ್ರಧಾನಮಂತ್ರಿ ಮನಮೋಹನ ಸಿಂಗ್ ದೇಶದ ಭದ್ರತೆಯ ಕಡೆಗೂ ಗಮನ ಕೊಟ್ಟಿಲ್ಲ, ಅವರ ಮುತ್ಸದ್ದಿತನದ ಮೇಲೆ ದೇಶದ ಜನತೆ ಇರಿಸಿದ್ದ ನಂಬಿಕೆಯನ್ನು ಅವರು ಹುಸಿಗೊಳಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 2 ನೇ ದಿನವಾದ ಬುಧವಾರ ಸಂಜೆ ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ವಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಚೀನಾ ದೇಶದ ಸೈನಿಕರು ಭಾರತಕ್ಕೆ ನುಗ್ಗಿದ ಸಂದರ್ಭದಲ್ಲಿ ನಮ್ಮ ಪ್ರಧಾನಿ ಅಸಹಾಯಕತೆಯನ್ನು ವ್ಯಕ್ತಪಡಿಸಿರುವುದು, ದೇಶದ ಜನತೆ ಕಳವಳ ಪಡುವಂತಾಗಿದೆ. ಜಗತ್ತಿನಲ್ಲಿ ಇಂದು ಪ್ರಜ್ವಲಿಸಬೇಕಾದ ದೇಶ ಕಾಂಗ್ರೇಸ್‌ನಿಂದಾಗಿ ಅಸಹಾಯಕ ದೇಶದಂತೆ ಭಾಸವಾಗುತ್ತಿದೆ ಇದು ದುರಂತ ಎಂದರು. ರಾಜ್ಯದಲ್ಲಂತೂ ಗೃಹ ಮಂತ್ರಿಗಳಿಗೆ ಕಳ್ಳರ ಹೆದರಿಕೆ, ಅರಣ್ಯ ಸಚಿವರಿಗೆ ಆನೆ-ಹುಲಿಗಳ ಚಿಂತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮೋದಿ ಯವರ ಚಿಂತೆ ಎಂದವರು ವ್ಯಂಗ್ಯವಾಡಿದರು. ರಾಜೇಶ್ ನಾಯ್ಕ್ ನೇತೃತ್ವದ ಪಾದಯಾತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು, ಗ್ರಾಮಗ್ರಾಮಗಳಲ್ಲಿ ದೊರೆತಿರುವ ಬೆಂಬಲ ಬಿಜೆಪಿಗೆ ಹೊಸ ಶಕ್ತಿಯನ್ನು ತಂದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಮುಂಬರುವ ಚುನಾವಣೆ ಯಾವುದೋ ಪಕ್ಷವನ್ನು ಗೆಲ್ಲಿಸಲು ಅಲ್ಲ, ಭಾರತವನ್ನು ಗೆಲ್ಲಿಸುವುದಕ್ಕಾಗಿ ಅದಕ್ಕಾಗಿ ನರೇಂದ್ರ ಮೋದಿಯವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚು ಹೆಚ್ಚು ಶ್ರಮವಹಿಸಬೇಕೆಂದು ಕರೆ ನೀಡಿದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು.”ಗ್ರಾಮದೆಡೆಗೆ -ಬಿಜೆಪಿ ನಡಿಗೆ ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್, ಸಂಚಾಲಕ ದೇವದಾಸ ಶೆಟ್ಟಿ, ಸುರೇಶ್ ರೈ ಪರ್ತಿಪ್ಪಾಡಿ, ಅಶೋಕ್ ಭಟ್, ಚಂದ್ರ ಶೇಖರ್ ಮಂಚಿ, ಮಜಿ ರಾಮ್‌ಭಟ್, ಧರ್ಮಾವತಿ ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಸೇರ್ಕಳ ಸ್ವಾಗತಿಸಿದರು, ರಾಧಾಕೃಷ್ಣ ಪೂರ್ಲಿಪ್ಪಾಡಿ ವಂದಿಸಿದರು.