ಬಂಟ್ವಾಳ: ಸ್ವಚ್ಛತೆ ನಮ್ಮ ಪ್ರತಿಯೊಬ್ಬರ ಆದ್ಯ ಕರ್ತವ್ಯ. ಸಾರ್ವಜನಿಕರನ್ನು ಸಂಘ- ಸಂಸ್ಥೆಗಳನ್ನು ಸೇರಿಕೊಂಡು ಸ್ವತ್ಛತೆಯ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಕ್ರಮ ನಿಜವಾದ ಸಾಮಾಜಿಕ ಕಳಕಳಿಯದ್ದು. ನಗರ ಪ್ರದೇಶಗಳಲ್ಲಿ ಶೌಚಾಲಯದ ಅಗತ್ಯ ಹೆಚ್ಚು ಇದೆ. ತಾಲೂಕಿನಲ್ಲಿ ಸ್ವಚ್ಛತೆಯ ಬಗ್ಗೆ ಅಧಿಕಾರಿಗಳು ಹಿಂದೇಟು ಹಾಕಬಾರದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು. ಅವರು ನ. 19ರಂದು ಬಿ.ಸಿ.ರೋಡ್ ಸ್ಪರ್ಶ ಕಲಾಮಂದಿರದಲ್ಲಿ ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ಗ್ರಾಮ ಪಂಚಾ ಯತ್ಗಳ ಆಶ್ರಯದಲ್ಲಿ ನಡೆದ ವಿಶ್ವ ಶೌಚಾಲಯ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಜಿ.ಪಂ. ಸದಸ್ಯ ರಾದ ರವೀಂದ್ರ ಕಂಬಳಿ, ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಎಂ.ಎಸ್. ಮಹಮ್ಮದ್, ಮಂಜುಳಾ ಮಾವೆ, ಕಮಲಾಕ್ಷಿ ಕೆ.ಪೂಜಾರಿ, ಮಮತಾ ಗಟ್ಟಿ, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ತಹಶೀಲ್ದಾರ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು, ತಾಲೂಕಿನ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಸಿಬಂದಿ ಶಾಂಭವಿ ರಾವ್, ಪ್ರಶಾಂತ್, ಕುಶಾಲಪ್ಪ, ಚಂದ್ರಾವತಿ, ಅಶೋಕ್, ಲಕ್ಷಣ್, ಸುಂದರ್ ಸಹಕರಿಸಿದರು. ಬಂಟ್ವಾಳ ತಾ.ಪಂ. ಇ.ಒ. ರಾಜಣ್ಣ ಪ್ರಸ್ತಾವನೆ ನೀಡಿ ಸ್ವಾಗತಿಸಿದರು. ಪಿಡಿಒ ವಿಜಯಶಂಕರ ಆಳ್ವ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.
ತಾಲೂಕಿನ ಪ್ರಮುಖ ನಗರದಲ್ಲಿಯೇ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರ ಬಗ್ಗೆ ಪ್ರಸ್ತಾಪಿಸಿದ ಶಾಸಕರು, ಪುರಸಭೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಗೈರಾಗಿದ್ದಾರೆ. ಯಾರೂ ಕೂಡ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದರು. ತಾಲೂಕಿನಲ್ಲಿ ಯಾವ ಕಡೆಗಳಲ್ಲಿ ಶೌಚಾಲಯ ಬೇಕಾಗಿದೆ ಎಂದು ಪರಿಶೀಲನೆ ನಡೆಸಿ ಕೂಡಲೇ ಶೌಚಾಲಯ ನಿರ್ಮಾಣ ಕಾರ್ಯ ಶೀಘ್ರವಾಗಿ ಮಾಡಿ ಎಂದು ಇ.ಒ.ಅವರಿಗೆ ತಿಳಿಸಿದರು.
courtesy: Udayavani