ಬಂಟ್ವಾಳ: ಹೈನುಗಾರಿಕೆ ಜೀವನದ ಒಂದು ಭಾಗವಾಗಿ ಬೆಳೆಯಬೇಕು, ಅದಕ್ಕೆ ಪೂರಕವಾದ ವಾತಾವರಣವನ್ನು ಒಕ್ಕೂಟದ ಮೂಲಕ ಮಾಡಬೇಕಾಗಿದೆ, ಹೈನುಗಾರಿಕೆ ಸಹಕಾರಿ ಸಂಘಗಳ ಮೂಲಕ ಪರಿವರ್ತನೆ ಹೊಂದುತ್ತಿವೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು. ವಗ್ಗ ಹಾಲು ಉತ್ಪಾದಕರ ಸಹಕಾರ ಸಂಘ.(. ನಿ.) ಇದರ ನೂತನ ವಿಸ್ತೃತ ಕಟ್ಟಡ ‘ಕ್ಷೀರ ಸಾಗರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿ.ಸಿ.ಟಿವಿ ಉದ್ಘಾಟನೆ ಮಾಡಿ ಮಾತನಾಡಿದರು. ಹಾಲು ಉತ್ಪಾದಕರ ಒಕ್ಕೂಟದ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶದ ಸಂಸ್ಕೃತಿಯ ಜೊತೆ ಕೃಷಿಯೊಂದಿಗೆ ಹೈನುಗಾರಿಕೆ ಬೆಳೆದು ಬಂದಿದೆ. ಹೈನುಗಾರಿಕೆ ಮಾಡಲು ಕೇಂದ್ರ ಸರಕಾರದ ವಿಪುಲವಾಗಿ ಅವಕಾಶ ಪ್ರೇರಣೆ ನೀಡಿದೆ. ಇತರ ಒಕ್ಕೂಟಗಳಿಗೆ ವಗ್ಗದ ಹಾಲು ಉತ್ಪಾದತಕರ ಒಕ್ಕೂಟ ಮಾದರಿಯಾಗಿದೆ ಎಂದು ಅವರು ಹೇಳಿದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್ ಮಾಡಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಅತ್ಯುತ್ತಮ ಲಾಭದಾಯಕ ಒಕ್ಕೂಟವಾಗಿ ನಮ್ಮ ಜಿಲ್ಲೆಯ ಒಕ್ಕೂಟ ಬೆಳೆದಿರುವುದು ಶ್ಲಾಘನೀಯ ಎಂದರು. ಹೈನುಗಾರಿಕೆ ಮತ್ತು ಕೃಷಿ ಒಂದೇ ನಾಣ್ಯಗಳ ಎರಡು ಮುಖ. ಹಾಗಾಗಿ ಹೈನುಗಾರಿಕೆಯ ಜೊತೆಯಲ್ಲಿ ಇತರ ಮಿಶ್ರ ಬೆಳೆಗಳನ್ನು ಬೆಳೆಸುವ ಮನಸ್ಥಿತಿಯನ್ನು ರೂಡಿಮಾಡಿಕೊಳ್ಳಿ ಎಂದರು. ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಭೂಮಿಯನ್ನು ಫಲವತ್ತಾಗಿ ಮಾಡಲು ಸಾಧ್ಯವಾಗುತ್ತದೆ.
ರೈತರಿಂದ ಒಕ್ಕೂಟ ಬೆಳೆಯಲು ಸಾಧ್ಯ, ಒಕ್ಕೂಟದ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಆಧುನಿಕತೆಯತ್ತ ಹೊಸ ಪ್ರಯೋಗಗಳ ಜೊತೆ ಸಾಗಿದಾಗ ಲಾಭ ಪಡೆಯಲು ಸಾಧ್ಯ ಎಂದು ತಿಳಿಸಿದರು. ನೂತನ ವಿಸ್ತೃತ ಕಟ್ಟಡ ‘ಕ್ಷೀರ ಸಾಗರ’ದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಜಿಲ್ಲಾದ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ನೆರವೇರಿಸಿದರು. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿ ಮೂಲಕ ಒಕ್ಕೂಟವನ್ನು ಬಲಪಡಿಸಿ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಗ್ಗ ಹಾಲು ಉತ್ಪಾದಕರ ಸಂಘದ ಅದ್ಯಕ್ಷ ಟಿ.ವಾಸುದೇವ ಗೌಡ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಅಮೂಲ್ ಸಂಸ್ಥೆ ಹಾಲು ಉತ್ಪಾದನೆಯ ವಿಷಯದಲ್ಲಿ ಕ್ರಾಂತಿಯನ್ನು ಮಾಡಿದೆ. ಹಾಲು ಒಕ್ಕೂಟ ರೈತರಿಗೆ ಶಕ್ತಿಯನ್ನು ನೀಡಿದೆ. ಹಾಲು ಉತ್ಪಾದನೆ ರೈತನ ಜೀವನದಲ್ಲಿ ಆರ್ಥಿಕ ಬದಲಾವಣೆಯನ್ನು ತಂದಿದೆ. ಉತ್ತಮ ಹಾಲು ಉತ್ಪಾದಕ ರ ಪೈಕಿ ದ.ಕ.ಜಿಲ್ಲೆಯು ಒಂದು ಎಂಬುದು ಸಂತಸ ತಂದಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರುಗಳಾದ ಡಾ| ಕೆ. ಎಂ. ಕ್ರಷ್ಣ ಭಟ್, ಕೆ.ಪಿ.ಸುಚರಿತ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ.ಸತ್ಯನಾರಾಯಣ, ಜಿಲ್ಲಾ ವ್ಯವಸ್ಥಾಪಕ ಡಾ| ನಿತ್ಯಾನಂದ ಭಕ್ತ, ಕಾರಿಂಜೇಶ್ವರ ದೇವಸ್ಥಾನದ ಸಮಿತಿಯ ಅದ್ಯಕ್ಷ ಜಿನರಾಜ ಆರಿಗ, ಜಿ.ಪಂ.ಸದಸ್ಯರುಗಳಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಸ್ಥಾಯಿಸಮಿತಿ ಅದ್ಯಕ್ಷೆ ಧನಲಕ್ಮೀ ಸಿ ಬಂಗೇರ, ಜಿಲ್ಲಾ ಒಕ್ಕೂಟದ ಉಪವ್ಯವಸ್ಥಾಪಕರಾದ ಟಿ.ವಿ.ಶ್ರೀನಿವಾಸ, ಡಾ| ಮಧುಸೂದನ್ ಕಾಮತ್ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಜೆಫ್ರಿ ರೋಡ್ರಿಗಸ್, ವಗ್ಗ ಒಕ್ಕೂಟದ ಮುಖ್ಯಕಾರ್ಯನಿರ್ವಣಾಧಿಕಾರಿ ಇಸಾಕ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು. ಕಾವಳಪಡೂರು ಗ್ರಾ.ಪಂ.ಅದ್ಯಕ್ಷ ಪ್ರಮೋದ್ ಕುಮಾರ್ ರೈ ಸ್ವಾಗತಿಸಿ , ಸಂಘದ ಸದಸ್ಯ ವಿನ್ಸೆಂಟ್ ಬೆನ್ನಿಸ್ ವಂದಿಸಿದರು. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ್ ನಿರೂಪಿಸಿದರು.