ಕಲ್ಲಡ್ಕ: ಕಾಂಗ್ರೆಸ್ ದೇಶದ ಏಕತೆಯನ್ನು ಒಡೆದು ಆಳುವ ನೀತಿಯನ್ನು ಕೊಟ್ಟಿದೆ. ಓಟಿಗಾಗಿ ಕಾಂಗ್ರೆಸ್ ಸಮಾಜವನ್ನು, ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಪ್ರತಿರೂಪವಾಗಿದೆ. ಭ್ರಷ್ಟಾಚಾರ ನಿಯಂತ್ರಿಸುವ ಲೋಕಾಯುಕ್ತದ ಬಾಗಿಲನ್ನು ಹಾಕಿದ್ದು ಕಾಂಗ್ರೆಸ್ ಎಂದು ಮಹಿಳಾಮೋರ್ಚಾ ರಾಜ್ಯ ಅಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.
ಅವರು ಸೆ. 8ರಂದು ಕಲ್ಲಡ್ಕ ಪಂಚವಟಿ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾಮೋರ್ಚಾ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಓಟಿಗಾಗಿ ಎಂತಹ ಹೀನ ಕೆಲಸ ಮಾಡಲೂ ತಯಾರಿದ್ದಾರೆ ಎಂಬುದಕ್ಕೆ ಕಾಂಗ್ರೆಸಿನ ಲಕ್ಷ್ಮೀ ಹೆಬ್ಬಾಳ್ಕರ್ ಉದಾಹರಣೆ ಆಗುತ್ತಾರೆ. ಕರ್ನಾಟದಲ್ಲಿ ಹುಟ್ಟಿಬೆಳೆದು ಓಟಿನ ವಿಚಾರ ಬಂದಾಗ ಮಹಾರಾಷ್ಟ್ರಕ್ಕೆ ಜೈ ಎನ್ನುತ್ತಾರೆ. ಇದು ಕಾಂಗ್ರೆಸ್ ನೀತಿ ಎಂದರು.
ರಾಜ್ಯದಲ್ಲಿ ಯಾವುದೇ ಮಹಿಳೆಗೆ ಭದ್ರತೆ ಇಲ್ಲ ಎಂಬುದಕ್ಕೆ ಹಾಡುಹಗಲಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಉದಾಹರಣೆಯಾಗಿದೆ. ಇದೊಂದು ಖಂಡನೀಯ ಕೃತ್ಯ ಎಂದರು.
ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಯಾವುದೇ ವಿವೇಚನೆ ಇಲ್ಲ. ದಲಿತರ ಮನೆಯಲ್ಲಿ ಊಟ ಮಾಡಿದರೆ ಅದಕ್ಕೆ ಕೊಂಕು ಮಾತು ಆಡುತ್ತಾರೆ. ದಲಿತರ ಮಹಿಳೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಯಸ್.ಯಡಿಯೂರಪ್ಪ ವಿವಾಹವಾಗಲಿ ಎನ್ನುತ್ತಾರೆ. ಇದು ಬುದ್ಧಿ ಇದ್ದವರು ಮಾತನಾಡುವ ಕ್ರಮ ಅಲ್ಲ ಎಂದರು.
ಬಿಜೆಪಿಯ ಯೋಜನೆಗಳು
ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಸಂಧ್ಯಾಸುರಕ್ಷ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ಹೆಮ್ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆ, ಬಾಣಂತಿಯರಿಗೆ ಮಡಿಲು ಯೋಜನೆ, ರೈತರಿಗೆ ಸಾಲಮನ್ನಾ ಯೊಜನೆಗಳನ್ನು ಹಾಕಿಕೊಂಡಿತ್ತು ಎಂದರು.
ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನಸಾಮಾನ್ಯರ ಸಂಪರ್ಕ ಮಾಡಿ ಜನಪ್ರೀತಿ ಸಾಧಿಸುವ ಮೂಲಕ ಯಾರೇ ಅಭ್ಯರ್ಥಿಯಾದರೂ ವಿಜಯಿ ಆಗಿಸುವ ಜವಾಬ್ದಾರಿ ಮಹಿಳಾ ಕಾರ್ಯಕರ್ತರ ಮೇಲಿದೆ. ಬಿಜೆಪಿ ಮಹಿಳಾ ಕಾರ್ಯಕರ್ತರು ಪಕ್ಷದ ಐಶ್ವರ್ಯ ಎಂದರು.
ಸುಮಾರು ಐದು ಸಾವಿರ ಮಂದಿ ಮಹಿಳಾ ಕಾರ್ಯಕರ್ತರು ವಿಸ್ತಾರಕರಾಗಿ ಕೆಲಸ ಮಾಡಿದ್ದು ಅವರ ಶ್ರಮ ಸಾಧನೆ ಅಭಿನಂದನೀಯ. ಕೆಲಸ ಇಲ್ಲಿಗೆ ನಿಲ್ಲಬಾರದು ಮುಂದುವರಿದು ಗೆಲುವು ಸಾಧಿಸಬೇಕು. ಅಲ್ಲಿಗೂ ನಮ್ಮ ಕೆಲಸ ನಿಲ್ಲುವುದಿಲ್ಲ. ಸರಕಾರ ಅಸ್ಥಿತ್ವಕ್ಕೆ ಬಂದಾಗ ನಮ್ಮ ಭರವಸೆಯನ್ನು ಈಡೇರಿಸಿ ನೀಡಬೇಕು ಎಂದು ಕರೆ ನೀಡಿದರು.
ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆ ಮತ್ತು ಪುಣಚ ಶ್ರೀದೇವಿ ಪ್ರೌಢ ಶಾಲೆಗೆ ಶ್ರೀಕ್ಷೇತ್ರ ಕೊಲ್ಲೂರಿನಿಂದ ಸಿಗುತ್ತಿದ್ದ ಅನುದಾನ ನಿಲ್ಲಿಸಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಸೇಡಿನ ಕ್ರಮವಾಗಿದೆ. ಡಾ| ಪ್ರಭಾಕರ ಭಟ್ ಅವರು ಈ ಶಾಲೆಯ ಪ್ರಮುಖರು ಎನ್ನುವುದಕ್ಕಾಗಿ ಇಂತಹ ದ್ವೇಷದ ರಾಜಕಾರಣವನ್ನು ರೈಗಳು ಮಾಡುತ್ತಿದ್ದಾರೆ. ಸಭೆ ಸಮಾರಂಭಗಳಲ್ಲಿ ದ್ವೇಷ ಮಾಡಬಾರದು ಎಂದು ಕರೆ ಕೊಡುವ ರೈಗಳು ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಜಾಯಮಾನದವರು ಎಂದು ಟೀಕಿಸಿದರು.
ಜಿಲ್ಲಾ ಬಿಜೆಪಿ ಮಹಿಳಾಮೋರ್ಚಾ ವತಿಯಿಂದ ಮುಷ್ಠಿ ಅಕ್ಕಿ ಅಭಿಯಾನ ನಡೆಯುತ್ತಿದ್ದು ಮಹಿಳೆಯರು ಅಭಿಯಾನದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಜಿಲ್ಲಾ ಮಹಿಳಾಮೋರ್ಚಾ ಅಧ್ಯಕ್ಷೆ ಪೂಜಾ ಪೈ, ಉಪಾಧ್ಯಕ್ಷೆ ಶಾರದಾ ರೈ, ಭಾಗೀರಥಿ ಮುರುಳ್ಯ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ರಾಜ್ಯ ಸಮಿತಿ ಸದಸ್ಯರಾದ ಜಯಂತಿ ನಾಯಕ್, ರಜನಿ ದುಗ್ಗಣ್ಣ, ಬಂಟ್ವಾಳ ತಾ| ಅಧ್ಯಕ್ಷೆ ನಳಿನಿ ಶೆಟ್ಟಿ, ಕಾರ್ಯದರ್ಶಿ ಜಯಂತಿ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಬ್ರಿಜೇಶ್ ಚೌಟ, ಬಿಜೆಪಿ ನೇತಾರ ರಾಜೇಶ್ ನಾಕ್ ಉಳಿಪಾಡಿ, ಮಾಜಿ ಶಾಸಕ ಎ. ರುಕ್ಮಯ ಪೂಚಾರಿ, ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಜಿಲ್ಲಾ ಪ್ರ.ಕಾರ್ಯದರ್ಶಿ ಸಂದ್ಯಾ ವೆಂಕಟೇಶ್ ಸ್ವಾಗತಿಸಿದರು. ತಾ| ಕಾರ್ಯದರ್ಶಿ ರಾಜೀವಿ ವಂದಿಸಿದರು.ಜಿಲ್ಲಾ ಮಹಿಳಾ ಕಾರ್ಯದರ್ಶಿ ಅರುಣಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
ಪಂಚ ನಿಷ್ಠೆ
ರಾಷ್ಟ್ರದ ಏಕತೆ ಮತ್ತು ಅಖಂಡತೆ, ಪ್ರಜಾಪ್ರಭುತ್ವ, ಗಾಂಧೀ ಪ್ರಣೀತ ರಾಮರಾಜ್ಯ, ಸರ್ವಧರ್ಮ ರಕ್ಷಣೆ , ಮೌಲ್ಯಾಧಾರಿತ ಆಡಳಿತ ಎಂಬ ಪಂಚ ನಿಷ್ಠೆಯಿಂದ ಮಹಿಳಾ ಮೋರ್ಚಾವು ಕೆಲಸ ಮಾಡುತ್ತದೆ – ಭಾರತಿ ಶೆಟ್ಟಿ