ಬಂಟ್ವಾಳ: ಸಜೀಪಮೂಡ ಗ್ರಾಮದ ಪಟ್ಟುಗುಡ್ಡೆ ಎಂಬಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣಕ್ಕೆ ಜಮೀನು ಕಾಯ್ದಿರಿಸಿಕೊಂಡು ಅಭಿವೃದ್ದಿಪಡಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿ ಮೂರು ತಿಂಗಳು ಕಳೆದರೂ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೇ ಇರುವ ಕಾರಣ ಮುಂದಿನ ಒಂದು ವಾರದೊಳಗಾಗಿ ಸ್ಮಶಾನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಸಜೀಪಮೂಡ ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿ ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದೆ.
ವಿಶ್ವಹಿಂದೂ ಪರಿಷತ್, ಬಜರಂಗದಳ ಮೊದಲಾದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಗ್ರಾಮದ ಹಿಂದೂ ಬಾಂಧವರು ಅಪಾರ ಸಂಖ್ಯೆಯಲ್ಲಿ ಈ ಸಂದರ್ಭ ಹಾಜರಿದ್ದು ಆರಂಭದಲ್ಲಿ ಸಜೀಪಮೂಡ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಮಕರಣಿಕರಿಗೆ ಮನವಿ ಸಲ್ಲಿಸಿ ಬಳಿಕ ಬಿ.ಸಿ.ರೋಡಿನ ತಾಲೂಕು ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ ಸಜೀಪಮೂಡ ಗ್ರಾಮದಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಲು ಜಮೀನಿ ಕಾದಿರಿಸಿದ್ದು ಮಾತ್ರವಲ್ಲದೆ ಮೂರು ತಿಂಗಳೊಳಗಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅಧೀನ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಆದರೆ ಈವರೆಗೂ ಅಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲದಿರುವುದರಿಂದ ಶವ ಸಂಸ್ಕಾರ ನಡೆಸಲು ಸಾಧ್ಯವಾಗಿಲ್ಲ. ಒಂದು ವಾರದೊಳಗಾಗಿ ನಮ್ಮ ಮನವಿಗೆ ಸ್ಪಂದಿಸಿ ಸ್ಮಶಾನ ನಿರ್ಮಾಣ ಕಾಮಗಾರಿ ಆರಂಭವಾಗುವ ಭರವಸೆ ಇದೆ. ತಪ್ಪಿದ್ದಲ್ಲಿ ಮುಂದಿನ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬಿಜೆಪಿ ಮುಖಂಡ ರಾಜೇಶ್‌ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ ಶವಸಂಸ್ಕಾರಕ್ಕೆ ಸರ್ಕಾರಿ ಜಮೀನನ್ನು ಕಾಯ್ದರಿಸಲಾಗಿದ್ದು ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಜಮೀನಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ಇದ್ದು, ಜವಬ್ದಾರಿಯುತ ಸ್ಥಾನದಲ್ಲಿರುವ ಪಂಚಾಯಿತಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕೆನ್ನುವುದು ನಮ್ಮ ಬೇಡಿಕೆ. ಸಂಬಂಧಪಟ್ಟ ಅಧಿಕಾರಿಗಳು ಮನವಿಗೆ ತಕ್ಷಣ ಸ್ಪಂದಿಬೇಕು, ತಪ್ಪಿದ್ದಲ್ಲಿ ಕಾನೂನು ಹೋರಾಟ ರೂಪಿಸಲಾಗುವುದು ಎಂದರು.
ಜಿ.ಪಂ.ಸದಸ್ಯ ತುಂಗಪ್ಪ ಬಂಗೇರಾ, ಪುರಸಭಾಧ್ಯಕ್ಷ ದೇವದಾಸ ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಶಾಂತಪ್ಪ, ವಿಶ್ವಹಿಂದೂ ಪರಿಷತ್‌ನ ಪ್ರಮುಖ ಅಶೋಕ್ ಶೆಟ್ಟಿ ಸರಪಾಡಿ, ಹಿಂದೂ ರುದ್ರಭೂಮಿ ನಿರ್ಮಾಣ ಸಮಿತಿಯ ಅಧ್ಯಕ್ಷ ಉದಯಕುಮಾರ್ ನಗ್ರಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಕಾರ್ಯದರ್ಶಿ ಸತೀಶ್ ಪೂಜಾರಿ ಸುಭಾಶ್ ನಗರ, ಬಜರಂಗದಳದ ಪ್ರಮುಖರಾದ ಗುರುರಾಜ್ ಬಂಟ್ವಾಳ್, ಪ್ರದೀಪ್ ಅಜ್ಜಿಬೆಟ್ಟು, ದಕ್ಷನ್, ಪ್ರಮುಖರಾದ ಸುರೇಶ್ ಶೆಟ್ಟಿ ಕೊಯಮಜಲು, ಸೀತಾರಾಮ ಮತ್ತಿತರರು ಹಾಜರಿದ್ದರು.