ಬಂಟ್ವಾಳ : ಕರ್ನಾಟಕ ಮತ್ತು ಕೇಂದ್ರದ ಕಾಂಗ್ರೇಸ್ ಸರ್ಕಾರ ಅತ್ಯಾಚಾರ್ ಸರ್ಕಾರ್ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಟೀಕಿಸಿದ್ದಾರೆ.ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸಾರಥ್ಯದಲ್ಲಿ ನಡೆಯುತ್ತಿರುವ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 9 ನೇ ದಿನವಾದ ಬುಧವಾರ ಸಂಜೆ ಕಾವಳಪಡೂರು ಗ್ರಾಮದ ವಗ್ಗದಲ್ಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ದೆಹಲಿ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ಮಹಿಳಾ ದೌರ್ಜನ್ಯಗಳು ಮಿತಿ ಮೀರಿದ್ದು, ಇದನ್ನು ನಿಯಂತ್ರಿಸುವಲ್ಲಿ ಕಾಂಗ್ರೇಸ್ ಆಡಳಿತ ವಿಫಲವಾಗಿದೆ ಎಂದ ಅವರು, ಕರ್ನಾಟಕದಲ್ಲಿ ಗೋಹತ್ಯೆ ನಿಷೇಧವನ್ನು ಹಿಂತೆಗೆಯುವ ಮೂಲಕ ಗೋಕಳ್ಳರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿದರು.ಅಟಲ್ ಜೀ ಸರ್ಕಾರವಿದ್ದ ಕಾಲದಲ್ಲಿ ಪ್ರಕಾಶಿಸುತ್ತಿದ್ದ ಭಾರತ ಇಂದು ಹಲವು ಸಮಸ್ಯೆಗಳಿಂದ ತುತ್ತಾಗಿದೆ, ಕಾಂಗ್ರೇಸ್ ನ ಪ್ರಧಾನಿ ಮನಮೋಹನ ಸಿಂಗ್ ಅವರ ಕಳೆದ 10 ವರ್ಷಗಳ ಆಡಳಿತದಲ್ಲಿ ದೇಶದ ಅಭಿವೃದ್ದಿ ಕಾರ್ಯಗಳು ಹಳ್ಳಹಿಡಿದಿದ್ದು, ದಿನದಿಂದ ದಿನಕ್ಕೆ ಸಮಸ್ಯೆಗಳು ಇಮ್ಮಡಿಯಾಗುತ್ತಿದೆ ಎಂದ ಅವರು, ಯುಪಿಎ ಸರ್ಕಾರ ಎಲ್ಲಾ ರಂಗದಲ್ಲೂ ವಿಫಲವಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಟೀಕಾಪ್ರಹಾರ ನಡೆಸಿದ ನಳಿನ್, ಕಾಂಗ್ರೇಸ್ ನ ಇನ್ನೊಂದು ಹೆಸರು ಭ್ರಷ್ಟಾಚಾರ ಎಂದರು, ದಿನಬಳಕೆಯ ವಸ್ತುಗಳ ಸಹಿತ ಗ್ಯಾಸ್, ತೈಲೋತ್ಪನ್ನಗಳ ಬೆಲೆಏರಿಕೆಯಿಂದ ಜನಜೀವನ ತತ್ತರಿಸಿದೆ ಎಂದರು.ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಚಾಲಕ , ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ “ಗ್ರಾಮದೆಡೆಗೆ -ಬಿಜೆಪಿ ನಡಿಗೆ ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಮಾತನಾಡಿ, ಪಕ್ಷದ ಕಾರ್ಯಕರ್ತರ ನಿಷ್ಠೆಯಿಂದಲೇ ಇಂದು ಬಿಜೆಪಿ ಗಟ್ಟಿಯಾಗುತ್ತಿದೆ ಎಂದರು.ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಉಪಾಧ್ಯಕ್ಷ ಪುರುಷ ಎನ್ ಸಾಲ್ಯಾನ್ ನೆತ್ರಕೆರೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಸುಲೋಚನಾ ಜಿಕೆ ಭಟ್ ಮಾತನಾಡಿದರು.
ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಪಕ್ಷದ ಪ್ರಮುಖರಾದ ದಿನೇಶ್ ಭಂಡಾರಿ, ಪೃಥ್ವಿರಾಜ್, ಸಂದೇಶ್ ಶೆಟ್ಟಿ, ಸಂಜಯಪ್ರಭು, ದೇವಪ್ಪ ಪೂಜಾರಿ, ರೊನಾಲ್ಡ್ ಡಿಸೋಜ ಅಮ್ಟಾಡಿ , ಸುರೇಶ್, ತನಿಯಪ್ಪ, ಭಾಸ್ಕರ ಪೂಜಾರಿ, ಅಬ್ದುಲ್ ರಝಾಕ್, ಆನಂದ ಕುಲಾಲ್, ಮಾಣಿಕ್ಯರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ.ಸದಸ್ಯರಾದ ವಿನಯನಾಯ್ಕ ಸ್ವಾಗತಿಸಿದರು, ದಿನೇಶ್ ಅಮ್ಟೂರು ವಂದಿಸಿದರು. ರಾಮದಾಸ್ ಬಂಟ್ವಾಳ ಕಾರ್ಯಕ್ರಮ ನಿರ್ವಹಿಸಿದರು. ಕಳೆದ 9 ದಿನಗಳಿಂದ ನಡೆಯುತ್ತಿರುವ ಪಾದಯಾತ್ರೆ 195 ಕಿ.ಮೀ.ಪೂರೈಸಿದ್ದು, ಸಂಸದ ನಳಿನ್ ಕುಮಾರ್ ಕಟೀಲು ಬುಧವಾರದ ಪಾದಯಾತ್ರೆಯಲ್ಲಿ ಪಾಲ್ಗೊಂಡು 6.ಕಿಮೀ ದೂರ ಹೆಜ್ಜೆ ಹಾಕಿದರು.