ಜೂನ್ 25 ರಿಂದ ಆರಂಭಗೊಳ್ಳಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಸಿದ್ಧತಾ ಪೂರ್ವಬಾವಿ ಸಭೆಯು ಈ ದಿನ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಬಂಟ್ವಾಳ ತಾಲೂಕಿನಲ್ಲಿ 5,200 ವಿದ್ಯಾರ್ಥಿಗಳು 17 ಪರೀಕ್ಷಾಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು ಶಿಕ್ಷಕರ ಜೊತೆ ಇತರ ಇಲಾಖಾಧಿಕಾರಿಗಳು ಸಹಕರಿಸುವಂತೆ ಶಾಸಕರು ಸೂಚಿಸಿದರು.
ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲು ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ, ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ಪ್ರತಿಯೊಂದು ಪರೀಕ್ಷಾಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ, ಮಾಸ್ಕ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಈ ವ್ಯವಸ್ಥೆಗಳಿಗೆ ಶಿಕ್ಷಕರಿಗೆ ಪ್ರತ್ಯೇಕ ಜವಬ್ದಾರಿಯನ್ನು ನೀಡಲಾಯಿತು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಹೆತ್ತವರು ಯಾವುದೇ ರೀತಿಯಲ್ಲಿ ಭಯಭೀತರಾಗುವ ಅವಶ್ಯಕತೆಯಿಲ್ಲ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚಿನ ನಿಗಾವಹಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ತಹಶೀಲ್ದಾರರಾದ ರಶ್ಮಿ ಎಸ್.ಆರ್, ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ, ಬೂಡಾ ಅಧ್ಯಕ್ಷರಾದ ಬಿ.ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.