ಬಂಟ್ವಾಳ: ದೇಶ,ಭಾಷೆ, ಗಡಿಯ ವಿಚಾರಗಳನ್ನು ಮೀರಿ ದೇಶದ ಯುವಜನಾಂಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರಮೋದಿಯವರನ್ನು ಬೆಂಬಲಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ.
ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸಾರಥ್ಯದಲ್ಲಿ ನಡೆಯುತ್ತಿರುವ ’ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 4ನೇ ದಿನವಾದ ಶುಕ್ರವಾರ ಸಂಜೆ ಕಲ್ಲಡ್ಕ ದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಗೋಕಳ್ಳರ ಸರ್ಕಾರ ಎಂದು ಟೀಕಿಸಿದ ಅವರು, ವ್ಯಾಪಕವಾದ ಗೋಕಳ್ಳತನ ನಡೆಯುತ್ತಿದ್ದರೂ ಸರ್ಕಾರ ಈ ಬಗ್ಗೆ ಯಾವುದೇ ಮುತುವರ್ಜಿ ವಹಿಸುತ್ತಿಲ್ಲ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳಿಗೆ ಅಧಿಕಾರದ ಅಮಲು ಏರಿದೆ, ಹಾಗಾಗಿ ಅವರಿಗೆ ಜನಸಾಮಾನ್ಯರ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾತರನ್ನೇ ಗುರಿಯಾಗಿರಿಸಿಕೊಂಡು ಯೋಜನೆಗಳನ್ನು ಸಿದ್ದಪಡಿಸುತ್ತಿದೆ, ಇದೇನು ಓಟುಬ್ಯಾಂಕ್ ರಾಜಕಾರಣವೇ ಎಂದು ಪ್ರಶ್ನಿಸಿದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು.”ಗ್ರಾಮದೆಡೆಗೆ -ಬಿಜೆಪಿ ನಡಿಗೆ ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಮಾತನಾಡಿ, ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮೊಳಗಿನ ಕೆಲ ತಪ್ಪುಗಳಿಂದ ನಮಗೆ ಹಿನ್ನಡೆಯಾಗಿದೆ, ಆದರೆ ಮುಂಬರುವ ಚುನಾವಣೆಯಲ್ಲಿ ಆ ತಪ್ಪುಗಳು ಮರುಕಳಿಸಬಾರದು, ನಮ್ಮ ಕೈ ಬಿಟ್ಟವರೂ ಈಗ ಮತ್ತೆ ಬಿಜೆಪಿಯತ್ತ ಬರುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ರಾಮದಾಸ್ ಬಂಟ್ವಾಳ, ಚೆನ್ನಪ್ಪ ಕೋಟ್ಯಾನ್, ದಿನೇಶ್ ಭಂಡಾರಿ, ದೇವಪ್ಪ ಪೂಜಾರಿ, ಮೋನಪ್ಪ ದೇವಸ್ಯ, ದಿನೇಶ್ ಅಮ್ಟೂರು, ಪುರುಷ ಸಾಲ್ಯಾನ್ ನೆತ್ರಕೆರೆ, ಬೃಜೇಶ್ ಚೌಟ, ಪ್ರಥ್ವಿರಾಜ್, ಬಾಬು ಶೆಟ್ಟಿ, ಅಣ್ಣುಪೂಜಾರಿ, ಜಗನ್ನಾಥ ಕುಲಾಲ್, ಮಹಾಬಲ ಶೆಟ್ಟಿ ನಂದಗೋಕುಲ , ಅಬ್ದುಲ್ ರಝಾಕ್ , ರೊನಾಲ್ಡ್ ಡಿ’ಸೋಜ ಅಮ್ಟಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಚಾಲಕ ದೇವದಾಸ ಶೆಟ್ಟಿ ಸ್ವಾಗತಿಸಿ ವಂದಿಸಿದರು. ಮಧ್ಯಾಹ್ನ ಎಪಿಎಂಸಿ ಅಧ್ಯಕ್ಷ ನೇಮಿರಾಜ ರೈ ಯವರ ನಿವಾಸದಿಂದ ಹೊರಟ ಪಾದಯಾತ್ರೆ ಯು ಬೋಳಂತೂರು, ಕೆದಿಲ, ಅಮ್ಟೂರು, ಬಾಳ್ತಿಲ, ಗೋಳ್ತಮಜಲು ಗ್ರಾಮಗಳಲ್ಲಿ ಪಾದಯಾತ್ರೆಯು ಸಂಚರಿಸಿತು. ಬಾಳ್ತಿಲ ಬಿಜೆಪಿ ಸ್ಥಾನೀಯ ಅಧ್ಯಕ್ಷ ಬಾಬು ಶೆಟ್ಟಿಯವರ ನಿವಾಸದಲ್ಲಿ ರಾಜೇಶ್ ನಾಯ್ಕ್ ನೇತೃತ್ವದ ಪಾದಯಾತ್ರೆಯ ತಂಡ ತಂಗಿತು.