ಬಂಟ್ವಾಳ: ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅಂಗನವಾಡಿ ಕೇಂದ್ರ ಪ್ರಮುಖವಾದ ಘಟ್ಟ, ಅಂಗನವಾಡಿ ದೇವಾಲಯಕ್ಕೆ ಸಮಾನ ಅಲ್ಲಿ ಕಲಿಯುವ ಮಕ್ಕಳು ದೇವರಿಗೆ ಸಮಾನ ಎಲ್ಲಾ ಅಂಗನವಾಡಿಗಳು ನೆಟ್ಲ ಅಂಗನವಾಡಿಯಂತೆ ಇರಬೇಕು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ಕೇಂದ್ರ ಇತರ ಅಂಗನವಾಡಿಗಳಿಗೆ ಮಾದರಿಯಾಗಿದೆ ಎಂದು ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು ಅವರು ಹೇಳಿದರು.
ಅವರು ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ, ಗೋಳ್ತಮಜಲು ಗ್ರಾಮ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಹಾಗೂ ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ನೆಟ್ಲ ಶಾಲೆ ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಪ್ರಥಮ ಪಾಠಶಾಲೆ ಅಂಗನವಾಡಿಯಾಗಿರುವುದರಿಂದ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಇಂತಹ ಅಂಗನವಾಡಿಗಳು ಸಹಕಾರಿಯಾಗಲಿದೆ. ಸಂಸ್ಕಾರಯುತವಾದ ಶಿಕ್ಷಣಕ್ಕೆ ನೆಮ್ಮದಿಯ ವಾತಾವರಣ ಕೂಡಾ ಅಷ್ಟೇ ಮುಖ್ಯವಾಗಿದೆ ಮಾದರಿ ಅಂಗನವಾಡಿ ನಿರ್ಮಾಣ ಮಾಡಿದ ಊರಿನ ನಾಗರಿಕರಿಗೆ ಅಭಿನಂದನೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಗೋಳ್ತಮಜಲು ಗ್ರಾ.ಪಂ.ಅಧ್ಯಕ್ಷೆ ಜಯಲಕ್ಷ್ಮಿ ಎಸ್. ವಹಿಸಿದ್ದರು. ಬಳಿಕ ಮಾತನಾಡಿದ ಅವರು ಅಂಗನವಾಡಿಯ ಕಾರ್ಯಕರ್ತರ ಪರಿಶ್ರಮದಿಂದ ಮಕ್ಕಳು ಶಿಸ್ತು ಸಂಯಮ ನೀತಿಯ ಜೊತೆಗೆ ಬೆಳವಣಿಗೆ ಹೊಂದುತ್ತಾರೆ ಎಂದು ಅವರು ಹೇಳಿದರು.
ಸರಕಾರದ ಜೊತೆ ಸಮುದಾಯದ ಪಾಲುಗೊಳ್ಳುವಿಕೆಯಿಂದ ಗ್ರಾಮದ ಅಭಿವೃದ್ಧಿ ಸಾಧ್ಯ ಎನ್ನುವುದಕ್ಕೆ ನೆಟ್ಲ ಅಂಗನವಾಡಿ ಸಾಕ್ಷಿ ಎಂದು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ಹೇಳಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯೆ ಕಮಲಾಕ್ಷೀ ಕೆ.ಪೂಜಾರಿ, ತಾ.ಪಂ.ಸದಸ್ಯ ಮಹಾಬಲ ಆಳ್ವ, ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ಮಹಮ್ಮದ್ ಮುಸ್ತಫಾ, ಗ್ರಾ.ಪಂ.ಸದಸ್ಯ ರಾದ ಗುರುವಪ್ಪ ಗೌಡ, ಗಿರೀಶ್ ಕುಲಾಲ್, ಸುಚಿತ್ರಾ ಗಟ್ಟಿ, ಪೂರ್ಣಿಮಾ ರಾವ್, ರಾಜೇಶ್ ಕೊಟ್ಟಾರಿ, ಮೋನಪ್ಪ ದೇವಸ್ಯ, ಲಿಖಿತಾ ಆರ್ ಶೆಟ್ಟಿ, ಗೋಪಾಲ ಪೂಜಾರಿ, ಜಯಶ್ರೀ, ಲಲಿತಾ, ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ನಳಿನಾಕ್ಷೀ ಶೆಟ್ಟಿ, ಪಿಡಿಒ ನಾರಾಯಣ ಗಟ್ಟಿ, ಇಂಜಿನಿಯರ್ನ ರೇಂದ್ರ ಬಾಬು, ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾಭಿವ್ರದ್ದಿ ಸಮಿತಿ ಅದ್ಯಕ್ಷ ಚಂದ್ರಿಕಾ ದೇವಾಡಿಗ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಿನಯ ಗಟ್ಟಿ, ನೆಟ್ಲ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೆಲಿನಾ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.
ಅಂಗನವಾಡಿ ಕೇಂದ್ರ ಕಟ್ಟಡದ ಉದ್ಘಾಟನೆಯ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಂಗನವಾಡಿ ನಿರ್ಮಾಣ ಕಾರ್ಯಕ್ಕೆ ಸಹಕರಿಸದ ಮಹನೀಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಅಂಗನವಾಡಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿದರು. ಅಂಗನವಾಡಿ ಕೇಂದ್ರದ ಶಿಕ್ಷಕಿ ಅರುಣಾ ರಾವ್ ವರದಿವಾಚಿಸಿ ಬಳಿಕ ಧನ್ಯವಾದ ನೀಡಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.