Rajesh Naik

ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ನಿಶ್ವಿತ

Rajesh-Naikಮೇ.5ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ನಿಶ್ವಿತ ಎಂದು ಅಭ್ಯರ್ಥಿ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಬಿ.ಸಿ ರೋಡಿನಲ್ಲಿ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತಿನ ಪ್ರವಾಸ ಮುಗಿಸಿದ್ದು, ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಪಕ್ಷದ ಹಿರಿಯರು, ಕಾರ್ಯಕರ್ತರನ್ನು ಸಂಪರ್ಕಿಸಿದ್ದೇನೆ ಎಂದರು.

ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಆಧಾರಿತವಾಗಿರುವ ಬಿಜೆಪಿಗೆ ಕಾರ್ಯಕರ್ತರೇ ಆಸ್ತಿ. ಬಂಟ್ವಾಳ ಕ್ಷೇತ್ರದಲ್ಲೂ ಕಾರ್ಯಕರ್ತರ ಹುಮ್ಮಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಗೆಲುವು ತಂದು ಕೊಡುವ ನಿರೀಕ್ಷೆ ಇದೆ ಎಂದು ಹೇಳಿದ ರಾಜೇಶ್ ನಾಯ್ಕ್,ತಾನು ಜನಪ್ರತಿನಿಧಿಯಾಗಿ ಆಯ್ಕೆಯಾದಲ್ಲಿ ಮತದಾರರೊಂದಿಗೆ ಪ್ರೀತಿ, ವಿಶ್ವಾಸ ಹಾಗೂ ಪ್ರಾಮಾಣಿಕವಾಗಿ ಸೇವೆ ಮಾಡುವುದಾಗಿ ಭರವಸೆಯಿತ್ತರು.

ಕಳೆದ 5 ವರ್ಷ ಬಿಜೆಪಿ ಸರಕಾರದ ಆಡಳಿತದಲ್ಲಾದ ಸಾಧನೆ, ಅಭಿವೃದ್ಧಿ ಕಾರ್ಯಗಳೇ ಬಿಜೆಪಿಯ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ತಿಳಿಸಿದರು.

ಬಂಟ್ವಾಳ ಕ್ಷೇತ್ರದಲ್ಲೇ ಅಗ್ನಿಶಾಮಕ ಠಾಣೆ, ನಗರ ಪೊಲೀಸ್ ಠಾಣೆ, ಪ.ಪೂ, ಪದವಿ ಕಾಲೇಜು, ಸರಕಾರಿ ಪಾಲಿಟೆಕ್ನಿಕ್, ಸಮುದಾಯ ಆರೋಗ್ಯ ಕೇಂದ್ರ 100 ಬೆಡ್‌ನ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವುದು ಸೇರಿದಂತೆ ಅನೇಕ ಕಣ್ಣಿಗೆ ಕಾಣುವಂತ ಅಭಿವೃದ್ಧಿ ಕೆಲಸಗಳು ಇಲ್ಲಿ ಬಿಜೆಪಿ ಶಾಸಕರಿದ್ದಾಗ ನಡೆದದ್ದೆ ಹೊರತು ಕಾಂಗ್ರೆಸ್ ಶಾಸಕರಿದ್ದಾಗ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಈ ಎಲ್ಲಾ ಸಾಧನೆಗಳು ಬಿಜೆಪಿ ಗೆಲುವಿಗೆ ವರದಾನವಾಗಲಿದೆ ಎಂದರು.

ಕೇಂದ್ರದ ಯುಪಿಎ ಸರಕಾರ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ದಿನಬಳಕೆಯ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದರೆ, ವರ್ಷಕ್ಕೆ 6 ಸಿಲಿಂಡರ್ ಸೀಮಿತಿಗೊಳಿಸಿ ಜನರ ಮೇಲೆ ಗದಾ ಪ್ರಹಾರ ಮಾಡಿದೆ ಎಂದು ಟೀಕಿಸಿದ ಅವರು ಭ್ರಷ್ಟಾಚಾರ-ದಿನಕ್ಕೊಂದು ಹಗರಣ-ಬೆಲೆಏರಿಕೆ ಇವು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ದೇಶಕ್ಕೆ ನೀಡಿರುವ ಕೊಡುಗೆಯಾಗಿದೆ ಎಂದರು.

ಸದ್ಯ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಎದ್ದಿದೆ. ಕ್ಷೇತ್ರದ ಜನರು ಕೂಡ ಬದಲಾವಣೆಯನ್ನು ಬಯಸಿದ್ದಾರೆ. ಕಾರ್ಯಕರ್ತರೂ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದು, ಬಂಟ್ವಾಳದಲ್ಲಿ ಈ ಬಾರಿ ಕಮಲ ಅರಳುವುದು ನಿಶ್ಚಿತವಾಗಿದೆ ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ರುಕ್ಮಯ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರ.ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಚುನಾವಣಾ ಮಾಧ್ಯಮ ಪ್ರಮುಖ್ ದಿನೇಶ್ ಭಂಡಾರಿ, ಪಕ್ಷದ ಮುಖಂಡರಾದ ನೇಮಿರಾಜ ರೈ, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ಪುಷ್ಪರಾಜ್ ಶೆಟ್ಟಿ ಮೊದಲಾದವರಿದ್ದರು.

Back To Top
Highslide for Wordpress Plugin