Rajesh Naik

ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಂದಿರುವ ಗುರಿ -ರಾಜೇಶ್ ನಾಯ್ಕ್

ಬಂಟ್ವಾಳ: ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿಗೆ ಯಾವುದೇ ಗೊಂದಲ, ಯುದ್ದ ಇಲ್ಲ. ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಂದಿರುವ ಗುರಿ ಎಂದು ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಸ್ಪಷ್ಟ ಪಡಿಸಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲ್ನಡಿಗೆ ಜಾಥವು 10ನೇ ದಿನವನ್ನು ಪೂರೈಸಿರುವ ಹಿನ್ನಲೆಯಲ್ಲಿ ಅಣ್ಣಳಿಕೆಯ ತಾ.ಪಂ.ಸದಸ್ಯ ವಸಂತ ಕುಮಾರ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜೇಶ್ ನಾಯ್ಕ್ ತಮ್ಮ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಹಾಗೂ ಮತದಾರರಿಂದ ವ್ಯಾಪಕ ಪ್ರೋತ್ಸಾಹ, ಬೆಂಬಲ ವ್ಯಕ್ತವಾಗಿದ್ದು ತನಗೆ ಅತ್ಯಂತ ಸಂತಸವನ್ನು ಉಂಟು ಮಾಡಿದೆ ಎಂದರು.

DSC_4267-(1)

ಪಾದಯಾತ್ರೆಯ ಹಿನ್ನಲೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ತಾವೇ ಬಿಜೆಪಿ ಅಭ್ಯರ್ಥಿಯೇ ಎಂಬ ಸಾರ್ವಜನಿಕ ವಲಯದಲ್ಲಿ ಮೂಡಿರುವ ಪ್ರಶ್ನೆಯ ಬಗ್ಗೆ ಪತ್ರಕರ್ತರು ಗಮನಸೆಳೆದಾಗ ತಾನು ಅಭ್ಯರ್ಥಿ ಆಕಾಂಕ್ಷಿಯೇ ಅಲ್ಲ ಎಂದು ಸ್ಪಷ್ಟ ಪಡಿಸಿದ ಅವರು ತಾನು ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ ಮಾತಿನಂತೆ ಇದೀಗ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಈ ಪಾದಯಾತ್ರೆ ನಡೆಸುತ್ತಿದ್ದೇನೆ. ಪಕ್ಷ ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಿ ನರೇಂದ್ರ ಮೋದಿಯನ್ನು ಮುಂದಿನ ಪ್ರಧಾನಿಯನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎಂಟು ತಿಂಗಳಿನಲ್ಲಿಯೇ ಕಳಪೆ ಆಡಳಿತ ನೀಡಿ ಜನಸಾಮಾನ್ಯರಲ್ಲಿ ನಿರಾಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯಲ್ಲೂ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ನಿಶ್ಚಿತ. ಪಾದಯಾತ್ರೆಯ ಉದ್ದಕ್ಕೂ ಮೋದಿ ಪರವಾದ ಅಲೆ ಕಂಡು ಬಂದಿದ್ದು, ಅದರಲ್ಲೂ ಯುವ ಸಮುದಾಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದರು.

ಬಿ.ಸಿ.ರೋಡಿಗೆ ಬಿಎಸ್‌ವೈ

ಪಾದಯಾತ್ರೆಯ ಸಮಾರೋಪ ಸಮಾರಂಭವು ಬಿ.ಸಿ.ರೋಡಿನ ಪದ್ಮನಾಭ ನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಸಂಧರ್ಭ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಮರಳಿ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಇದೇ ಮೊದಲ ಬಾರಿಗೆ ಕರಾವಳಿ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ದತೆಗಳು ನಡೆಯುತ್ತಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೇವದಾಸ್ ಶೆಟ್ಟಿ ತಿಳಿಸಿದ್ದಾರೆ.

ಅದೇ ರೀತಿ ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸಹಿತ ಪಕ್ಷದ ರಾಜ್ಯ, ಜಿಲ್ಲಾ ನಾಯಕರು ಕೂಡ ಭಾಗವಹಿಸುವರು. ಅಂದು ಬೆಳಿಗ್ಗೆ ಕಳ್ಳಿಗೆ ಗ್ರಾಮದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನಡೆದು ಬಳಿಕ ರಾಜೇಶ್‌ನಾಯ್ಕ್ ನೇತೃತ್ವದ ಪಾದಯಾತ್ರೆಯು ಆರಂಭವಾಗಲಿದೆ. ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ ಬಂದು ಬಿ.ಸಿ.ರೋಡು, ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದ ಸನ್ನಿಧಿಯಲ್ಲಿ ಪಾದಯಾತ್ರೆ ಸಮಾಪನಗೊಳ್ಳಲಿದೆ ಎಂದು ಅವರು ತಿಳಿಸಿದರು.

ಈಗಾಗಲೇ 10 ದಿನದ ಪಾದಯಾತ್ರೆಯಲ್ಲಿ 52 ಗ್ರಾಮಗಳನ್ನು ಸಂದರ್ಶಿಸಲಾಗಿದ್ದು 219 ಕಿ.ಮೀ. ದೂರವನ್ನು ಕ್ರಮಿಸಲಾಗಿದೆ. ರಾಜೇಶ್ ನಾಯ್ಕ್‌ರ ಈ ಹೊಸ ಪರಿಕಲ್ಪನೆಯ ಕಾರ್ಯಕ್ರಮ ಬಗ್ಗೆ ರಾಜ್ಯದ ಇತರ ಜಿಲ್ಲೆಗಳಿಂದಲೂ ಶ್ಲಾಘನೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾವು ಕಾರ್ಯಕ್ರಮ ಸಂಘಟಿಸುವುದಾಗಿ ಪಕ್ಷದ ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿಸಿದರು.

 

ನಮೋ ಟೀ ಸ್ಟಾಲ್ 

 

DSC_4217

ಗ್ರಾಮದೆಡೆಗೆ ಬಿಜೆಪಿ ನಡಿಗೆ ಕಾಲ್ನಡಿಗೆ ಜಾಥದ ಪ್ರಯುಕ್ತ ಅಣ್ಣಳಿಕೆಯಲ್ಲಿ ಹಾಕಲಾದ ನಮೋ ಟೀ ಸ್ಟಾಲ್ ಗಮನ ಸೆಳೆಯಿತು.

DSC_4215

ಜಾಥದ ರುವಾರಿ ರಾಜೇಶ್ ನಾಯ್ಕ್ ಹಾಗೂ ಪಕ್ಷದ ಇತರ ಪ್ರಮುಖರು ಟೀ ಖರೀದಿಸಿ ಆಸ್ವಾದಿಸಿದರು.

Back To Top
Highslide for Wordpress Plugin