Rajesh Naik

ಕಾಂಗ್ರೇಸ್‌ನ ಗೂಂಡಾ ರಾಜ್ಯ ಮತ್ತು ತುಘಲಕ್ ಸರ್ಕಾರ – ನಳಿನ್ ಕಟೀಲು

ಬಂಟ್ವಾಳ : ಗೃಹ ಇಲಾಖೆಗೆ ಪೊಲೀಸರ ಮೇಲೆ ನಿಯಂತ್ರಣ ಇಲ್ಲ, ಕಾಂಗ್ರೇಸ್‌ನ ಮುಖಂಡರು ರಾಜ್ಯದಲ್ಲಿ ಗೂಂಡಾ ರಾಜ್ಯ ನಿರ್ಮಾಣ ಮಾಡುತ್ತಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ತುಘಲಕ್ ಸರ್ಕಾರ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಆರೋಪಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ನಡೆಯುತ್ತಿರುವ ’ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪಾದಯಾತ್ರೆಯ 3 ನೇ ದಿನವಾದ ಗುರುವಾರ ಸಂಜೆ ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಬಡವರ ಎಲ್ಲಾ ಯೋಜನೆಗಳ ಹಣವನ್ನು ಸರ್ಕಾರ ಕೊಟ್ಟ ಅನ್ನ ಭಾಗ್ಯದ ಹೆಸರಿನಲ್ಲಿ ಅವ್ಯವಹಾರಕ್ಕೆ ಬಿಡುಗಡೆಗೊಳಿಸಿದ ಸರ್ಕಾರ, ಕ್ಷೀರಭಾಗ್ಯ ವೆಂಬ ವಿಫಲ ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ “ಪಾನಭಾಗ್ಯ” ದ ಮೂಲಕ ಮನೆಮನೆಗೆ ಸಾರಾಯಿ ಹಂಚಲು ಸಿದ್ದತೆ ನಡೆಸಿದ್ದಾರೆ ಎಂದು ನಳಿನ್ ವ್ಯಂಗ್ಯವಾಡಿದರು.

mittanadka-padayatree600

ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವುದು ಬಿಜೆಪಿ ಯ ತತ್ವ ಸಿದ್ದಾಂತ. ಇದೀಗ ಈ ಪಕ್ಷ ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿಯನ್ನಾಗಿಸುವ ಸಂಕಲ್ಪ ತೊಟ್ಟಿದ್ದು, ಇದಕ್ಕೆ ಇಡೀ ದೇಶಕ್ಕೆ ದೇಶವೇ ಬೆಂಬಲವಾಗಿದೆ ಎಂದರು. ಇಡೀ ದೇಶಕ್ಕೆ ಮಾದರಿಯಾದ ಪಾದಯಾತ್ರೆಯನ್ನು ಹಮ್ಮಿಕೊಂಡಿರುವ ಬಂಟ್ವಾಳ ಬಿಜೆಪಿ ಹಾಗೂ ರಾಜೇಶ್ ನಾಯ್ಕ್ ರವರ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಾದಯಾತ್ರೆಯ ಕಲ್ಪನೆಯೇ ವಿಶಿಷ್ಟವಾದುದು ಎಂದು ಶ್ಲಾಘಿಸಿದರು.

ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿಯವರು ಮಾತನಾಡಿ, ಭಾರತದ ಪ್ರಜಾಪ್ರಭುತ್ವದಲ್ಲಿ ವಂಶರಾಜಕೀಯ ಎಷ್ಟರ ಮಟ್ಟಿಗೆ ಸರಿ ಎಂಬ ಬಗ್ಗೆ ದೇಶದ ಜನತೆ ಚಿಂತನೆ ನಡೆಸಬೇಕಾಗಿದೆ, ಪಕ್ಷ ಹಾಗೂ ಪ್ರಧಾನಮಂತ್ರಿ ಪಟ್ಟದ ವಿಚಾರದಲ್ಲಿ ಕಾಂಗ್ರೇಸ್ ಪಕ್ಷ ವಂಶರಾಜಕೀಯವನ್ನೇ ಅನುಸರಿಸಿಕೊಂಡು ಬಂದಿದ್ದು, ಈ ಬಾರಿಯ ಲೋಕಸಭಾ ಚುನಾವಣೆ ಈ ವಂಶ ಗೊಂದಲಕ್ಕೆ ಅಂತ್ಯಹಾಡಬೇಕಿದೆ ಎಂದರು.

padayatre-kanyana600

ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ಜಿ.ಆನಂದ ಅಧ್ಯಕ್ಷತೆ ವಹಿಸಿದ್ದರು.”ಗ್ರಾಮದೆಡೆಗೆ -ಬಿಜೆಪಿ ನಡಿಗೆ” ಪಾದಯಾತ್ರೆಯ ನೇತಾರ ಉಳಿಪಾಡಿ ಗುತ್ತು ರಾಜೇಶ್ ನಾಯ್ಕ್ ಮಾತನಾಡಿ ಮುಂದಿನ ಸ್ವಾತಂತ್ರ್ಯೋತ್ಸವದ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜವನ್ನು ಹಾರಿಸುವ ವ್ಯಕ್ತಿ ನರೇಂದ್ರಮೋದಿಯಾಗಬೇಕು ಎನ್ನುವ ಸಂಕಲ್ಪ ನಮ್ಮದಾಗಲಿ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಕ್ಷೇತ್ರ ಬಿಜೆಪಿ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ, ದೇವಪ್ಪ ಪೂಜಾರಿ, ದಿನೇಶ್ ಭಂಡಾರಿ, ಸ್ಥಾನೀಯ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಭಟ್ ವಿಘ್ನೇಶ್ವರ ಭಟ್, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕ ದೇವದಾಸ ಶೆಟ್ಟಿ ಸ್ವಾಗತಿಸಿ ವಂದಿಸಿದರು.

Back To Top
Highslide for Wordpress Plugin